ಕೊತ

ತಮಿಳುನಾಡಿನ ನೀಲಗಿರಿಯ ಮೂಲನಿವಾಸಿಗಳಲ್ಲಿ ಒಂದು ಗುಂಪಿನವರ ಭಾಷೆ. ಸುಮಾರು 1200 ಜನ ಈ ಭಾಷೆಯನ್ನು ಬಳಸುತ್ತಿದ್ದಾರೆ. ಇವರು ಮೊದಮೊದಲು ತೊದವ ಮತ್ತು ಬಡಗರೊಂದಿಗೆ ಸಹಬಾಳುವೆ ನಡೆಸುತ್ತ ಕುಂಬಾರರಾಗಿ, ಕಮ್ಮಾರರಾಗಿ, ಹಾಡುಗಾರರಾಗಿ ಕಾಲಹಾಕುತ್ತಿದ್ದರು. ಕೊತ ಎಂಬ ಇವರ ಹೆಸರು ಬಹುಶಃ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಕುಂಬಾರ ಎಂಬ ಅರ್ಥ ಬರುವ ಮೂಲಶಬ್ದಕ್ಕೆ ಸಂಬಂಧಪಟ್ಟುದಾಗಿದೆ. (ಎಮೆನೊ ಅವರ ಎ ಡ್ರವಿಡಿಯನ್ ಎಟಿಮೊ ಲೋಜಿಕಲ್ ಡಿಕ್ಷನರಿಯ `ಪಾಟರ್ (1468) ಶಬ್ದವನ್ನು ನೋಡಬಹುದು). ದ್ರಾವಿಡ ಭಾಷಾ ಪರಿವಾರದಲ್ಲಿ ಕೊತ ಭಾಷೆಯ ಸ್ಥಾನಮಾನಗಳೇನು ಎಂಬುದನ್ನು ನಿರ್ಧರಿಸಬೇಕಾದರೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಕೊತ ಭಾಷೆ ಅನೇಕ ವಿವರಗಳಲ್ಲಿ ತೊದ ಭಾಷೆಯಿಂದ ಭಿನ್ನವಾಗಿ ತೋರಿದರೂ ಅದು ತೊದ ಭಾಷೆಗೆ ತೀರ ಸಮೀಪವಾಗಿದೆ. ತೊದ ಭಾಷೆಯಂತೆ ಕೊತ ಭಾಷೆ ಕೂಡ ಬಹುಮಟ್ಟಿಗೆ ಪದಗಳ ಮಧ್ಯ ಮತ್ತು ಅಂತ್ಯಸ್ವರಗಳನ್ನು ಕಳೆದುಕೊಂಡಿದೆ.

	ಅನೇಕ ಸಂದರ್ಭಗಳಲ್ಲಿ ತೊದ ಭಾಷೆಯಲ್ಲಿ ಉಂಟಾಗಿರುವಷ್ಟು ಧ್ವನಿ ಪರಿವರ್ತನೆ ಕೊತ ಭಾಷೆಯಲ್ಲಿ ಉಂಟಾಗಿಲ್ಲ. ತೊದ ಭಾಷೆಯಲ್ಲಿ ಮೂಲ *ರ(*ಡಿ) ರ(ಡಿ) ಆಗಿಯೇ ಉಳಿಯುತ್ತದೆ; ಆದರೆ ಕೊತ ಭಾಷೆಯಲ್ಲಿ ಮೂಲ *ರಕಾರದ ಜೊತೆಯಲ್ಲಿ ಸೇರಿಹೋಗುತ್ತದೆ. ಹೀಗಿದ್ದರೂ ಎರಡು ಭಾಷೆಗಳೂ ಮೂಲದ್ರಾವಿಡದ ವತ್ಸ್ರ್ಯಗಳನ್ನು (*ಟಿಡಿ, *ಡಿಡಿ ) ವತ್ಸ್ರ್ಯಗಳನ್ನಾಗಿಯೇ (ಜ,ಣ) ಉಳಿಸಿಕೊಂಡಿರುವುದರಲ್ಲಿ ಸಮಾನಗುಣವನ್ನು ಪ್ರದರ್ಶಿಸುತ್ತವೆ. ಅಲ್ಲದೆ ಅನುನಾಸಿಕ ಮತ್ತು ಸ್ಪರ್ಶಧ್ವನಿಗಳು ಕೂಡಿದಾಗ ಉಂಟಾಗುವ ಅನುನಾಸಿಕ ಲೋಪವನ್ನು ಎರಡು ಭಾಷೆಗಳಲ್ಲಿಯೂ ಕಾಣಬಹುದು. ಈ ಎರಡು ಭಾಷೆಗಳು ತಮಿಳು-ಮಲಯಾಳಂ ಭಾಷೆಗಳ ಕ್ರಿಯಾಪದದಲ್ಲಿನ ಸಾಮಾನ್ಯ ಪ್ರಕೃತಿ ಮತ್ತು ಭೂತಪ್ರಕೃತಿಗಳ ಸಂಬಂಧವನ್ನು ಒಪ್ಪಿಕೊಳ್ಳುತ್ತವೆ. ಕೊತ ಭಾಷೆ ತೊದ ಭಾಷೆಯಂತೆಯೇ ವರ್ತಮಾನ-ಭವಿಷ್ಯತ್ (ಅ-ಭೂತ) ಕಾಲಗಳಲ್ಲಿ ಭೂತ (ಕಾಲದ) ಪ್ರಕೃತಿಯನ್ನು ಬಳಸುತ್ತದೆ; ಆದರೆ ತೊದ ಊಷ್ಮಪ್ರತ್ಯಯವನ್ನು ಭೂತಕಾಲದಲ್ಲಿ ಬಳಸಿದರೆ ಕೊತ ಈ ರೂಪವನ್ನು ವಿರೋಧಾತ್ಮಕ ಭೂತಕಾಲದಲ್ಲಿ(ಅನ್‍ರಿಯಲ್ ಪಾಸ್ಟ್) -ವ್-( —v-)ಪ್ರತ್ಯಯವನ್ನು ಭೂತಕಾಲದಲ್ಲಿ ಬಳಸುತ್ತದೆ.

	ಕೊತ ಭಾಷೆ ಬಡಗದಿಂದ (ಕನ್ನಡದ ಉಪಭಾಷೆ) ಸಾಕಷ್ಟು ಶಬ್ದಗಳನ್ನು ಎರವಲು ಪಡೆದಿದೆ. ಅದರಲ್ಲೂ ವಿಶೇಷವಾಗಿ `ಪೋಗು ಕ್ರಿಯಾಪದವೂ ಸೇರಿದಂತೆ ಆದಿ ಪ ಕಾರವಿಲ್ಲದ ಅನೇಕ ಶಬ್ದಗಳನ್ನು ತೆಗೆದುಕೊಂಡಿದೆ.
(ಎಂ.ಬಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ